Description

ಲೇಖಕರು: ಜಯಂತ ಕಾಯ್ಕಿಣಿ
ಚಿಕ್ಕ ವಯಸ್ಸಿನಲ್ಲೇ ಅಕಾಡೆಮಿಯಿಂದ ಯುವ ಕವಿ ಪ್ರಶಸ್ತಿ ಪಡೆದ ಜಯಂತ ಕಾಯ್ಕಿಣಿ ಗೋಕರ್ಣದವರು. ಸಾಹಿತ್ಯ, ಸಿನೆಮಾ ಇವರ ಆಸಕ್ತಿಯ ಕ್ಷೇತ್ರಗಳು. ತಮ್ಮ ವಿಶಿಷ್ಠ ಸಂವೇದನೆಗಳ ಸಣ್ಣ ಕತೆಗಳಿಂದ ತಮ್ಮದೇ ಓದುಗರನ್ನ ಸೃಷ್ಟಿಸಿಕೊಂಡ ಜಯಂತ ಸದ್ಯದ ಕನ್ನಡದ ಜನಪ್ರಿಯ ಕವಿ. ರಂಗದೊಂದಿಷ್ಟು ದೂರ, ಕೋಟಿ ತೀರ್ಥ, ನೀಲಿ ಮಳೆ, ತೆರೆದಷ್ಟೇ ಬಾಗಿಲು, ತೂಫಾನ್ ಮೇಲ್, ಬೊಗಸೆಯಲ್ಲಿ ಮಳೆ ಇವರ ಕೆಲವು ಜನಪ್ರಿಯ ಕೃತಿಗಳು. ಕನ್ನಡ ಸಿನೆಮಾ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದ ಮುಂಗಾರು ಮಳೆಯ ಹೆಚ್ಚಿನ ಹಾಡುಗಳನ್ನ ರಚಿಸಿದ ಜಯಂತ ಕಾಯ್ಕಿಣಿ ಕುವೆಂಪು, ರಾಜಕುಮಾರರ ಕುರಿತು ನಡೆಸಿಕೊಟ್ಟ ನಮಸ್ಕಾರ ಕಾರ್ಯಕ್ರಮಗಳು ಅವರ ಗಮನಾರ್ಹ ಸಾಧನೆಗಳು. ಅವರ ದಗಡೂ ಪರಭನ ಕತೆಯನ್ನ ಈ ಶ್ರಾವ್ಯ ಸಂಚಿಕೆಗೆ ಆಯ್ದುಕೊಳ್ಳಲಾಗಿದೆ.

ಓದಿದವರು: ಪ್ರಕಾಶ್ ರೈ
ಭಾರತೀಯ ಚಿತ್ರರಂಗಕ್ಕೆ ಕನ್ನಡ ರಂಗಭೂಮಿ ಕೊಟ್ಟ ಅಪರೂಪದ ಕೊಡುಗೆ ಪ್ರಕಾಶ್ ರೈ. ಬಹುಮುಖಿ ನಟ, ನಿರ್ದೇಶಕ, ನಿರ್ಮಾಪಕ. ಕನ್ನಡದಲ್ಲಿ ನಾನೂ ನನ್ನ ಕನಸು ಮತ್ತು ಒಗ್ಗರಣೆ ನಿರ್ದೇಶಿಸಿರುವ ಪ್ರಕಾಶ್ ಸಾಕಷ್ಟು ಪ್ರಬುದ್ಧ ಪಾತ್ರಗಳನ್ನ ನಿರ್ವಹಿಸಿದ್ದಾರೆ. ಇರುವರ್ ಮತ್ತು ಕಾಂಚೀವರಂ ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿರುವ ಪ್ರಕಾಶ್ ರೈ ನಮ್ಮ ನಡುವಿನ ದೈತ್ಯ ಪ್ರತಿಭೆ. ಕನ್ನಡ, ತೆಲುಗು, ತಮಿಳು, ಮರಾಠಿ, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಅಭಿನಯಿರುವ ಪ್ರಕಾಶ್ ರೈ. ಕನ್ನಡದ ಶ್ರೇಷ್ಥ ಕತೆಗಾರರಲ್ಲೊಬ್ಬರಾಗಿರುವ ಜಯಂತ ಕಾಯ್ಕಿಣಿಯವರ ದಗಡೂ ಪರಬನ ಅಶ್ವಮೇಧ ಕತೆಯನ್ನ ಈ ಯೋಜನೆಗಾಗಿ ಓದಿದ್ದಾರೆ.

ಹಿನ್ನೆಲೆ ಸಂಗೀತ: ಎಸ್ ಆರ್ ರಾಮಕೃಷ್ಣ
ಅನೇಕ ನಾಟಕಗಳು, ಸಿನೆಮಾಗಳು ಮತ್ತು ದೂರದರ್ಶನದ ಹಲವಾರು ಕಾರ್ಯಕ್ರಮಗಳಿಗೆ ಸಂಗೀತ ನೀಡಿರುವ ರಾಮಕೃಷ್ಣರವರು, ಕನ್ನಡ ಚಿತ್ರಗಳು ಮತ್ತು ನಾಟಕಗಳ ಹೆಸರಾಂತ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ನಾಗಭರಣ, ಟಿ. ಎಸ್. ರಂಗ, ಎನ್. ಎಸ್. ಶಂಕರ್, ನಟರಾಜ್ ಹೊನ್ನವಳ್ಳಿ, ಸುರೇಶ್ ಅನಗಳ್ಳಿ, ಪ್ರಸನ್ನ, ಕೆ. ಎಮ್ ಚೈತನ್ಯ, ಎನ್. ಸುದರ್ಶನ್ ಹಾಗೂ ಪ್ರಕಾಶ್ ಬಾಬು ಮುಂತಾದವರೊಡನೆ ಕೆಲಸ ಮಾಡಿದ್ದಾರೆ. ಅನೇಕ ಪ್ರಖ್ಯಾತ ಹಿಂದೂಸ್ತಾನಿ ಸಂಗೀತಗಾರರೊಂದಿಗೆ ಹಾರ್ಮೋನಿಯಮ್ ನ ಸಾರಥ್ಯ ವಹಿಸಿರುವ ಇವರು ‘ವಚನ ಬ್ಯಾಂಡ್’ ಎಂಬ ೧೨ನೇ ಶತಮಾನದ ವಚನಗಳನ್ನು, ವರ್ತಮಾನದಲ್ಲಿ ಸಂಗೀತವನ್ನು ಅಳವಡಿಸಿ ಹಾಡುವ ಸಂಸ್ಥೆಯನ್ನು ಹುಟ್ಟುಹಾಕಿದವರಲ್ಲೊಬ್ಬರು. ಸಿದ್ದಲಿಂಗಯ್ಯನವರ ಆತ್ಮಚರಿತ್ರೆಯನ್ನು (A Word with you, world) ಮತ್ತು ಕೃಪಾಕರ ಸೇನಾನಿಯವರ ಅಪಹರಣದ ಕಥೆ (Birds, Beasts and Bandits) ಯನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ. ಭಾರತ ಮತ್ತು ವಿದೇಶಗಳ ಅನೇಕ ವಿಶ್ವವಿದ್ಯಾಲಯಗಳಲ್ಲಿ ಇವರ ಈ ಅನುವಾದಗಳನ್ನು ಪಠ್ಯವನ್ನಾಗಿಸಿ ಬೋಧಿಸುತ್ತಿದ್ದಾರೆ
