Description
ಲೇಖಕರು: ರವಿ ಬೆಳಗೆರೆ
ಕನ್ನಡದ ವೈಬ್ರೆಂಟ್ ಪತ್ರಕರ್ತ ಮತ್ತು ಲೇಖಕ ರವಿ ಬೆಳಗೆರೆ. ತಮ್ಮ ಸೂಜಿಮೊನೆಯಂತಹ ಬರವಣಿಗೆಗಳಿಂದ ಸಾಕಷ್ಟು ಯುವ ಮನಸ್ಸುಗಳನ್ನ ತಟ್ಟಿದ ಬರಹಗಾರ ರವಿ. ಹಾಯ್ ಬೆಂಗಳೂರು ಪತ್ರಿಕೆ, ಸಿನೆಮಾ ನಟನೆ, ಕಿರುತೆರೆ, ಸಾಮಾಜಿಕ ಕಾರ್ಯಗಳು ಹೀಗೇ ದೈತ್ಯನಂತೆ ಕೆಲಸ ಮಾಡುವ ರವಿ ಕನ್ನಡದ ಅಪರೂಪದ ಪ್ರತಿಭೆ. ರವಿ ಬೆಳೆಗೆರೆಯವರ ಪಾ ವೆಂ ಹೇಳಿದ ಕತೆ ಸಂಕಲನದಿಂದ ಮಸೀದಿ ಬಿದ್ದ ಮೂರನೇ ದಿನ ಕತೆಯನ್ನ ಆಯ್ದುಕೊಂಡಿದ್ದೇವೆ. ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ., ಮಾಡಿದ್ದಾರೆ. `ಪ್ರಾರ್ಥನಾ` ಇವರು ಕಟ್ಟಿರುವ ಶಾಲೆ. ಎರಡು ಬಾರಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಬಂದಿವೆ. ಹಿರಿಯರಾದ ಶಿವರಾಮ ಕಾರಂತರ ಹೆಸರಿನ ಎರಡು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡೆಮಿಯವರು ಪತ್ರಿಕೋದ್ಯಮದಲ್ಲಿನ ಇವರ ಸಾಧನೆಗೆ ಪ್ರಶಸ್ತಿ ನೀಡಿದ್ದಾರೆ. ಅಂತೆಯೇ ಕರ್ನಾಟಕ ರಾಜ್ಯ ಸರ್ಕಾರವು ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ.
ಓದಿದವರು: ಟಿ ಎಸ್ ನಾಗಾಭರಣ
ಕನ್ನಡದ ಮಹತ್ವದ ನಿರ್ದೇಶಕ ನಾಗಾಭರಣ. ಕಲಾತ್ಮಕ ಮತ್ತು ಜನಪ್ರಿಯ ಸಿನೆಮಾಗಳನ್ನ ಬೆಸೆಯುವ ತಮ್ಮದೇ ಶೈಲಿಯಲ್ಲಿ ಸಿನೆಮಾ ಕೊಟ್ಟವರು ನಾಗಾಭರಣ. ಚಿನ್ನಾರಿಮುತ್ತ, ನಾಗಮಂಡಲ, ಜನುಮದ ಜೋಡಿ, ಆಸ್ಫೋಟ, ಸಂತ ಶಿಶುನಾಳ ಶರೀಫ ಇವರ ಕೆಲವು ಪ್ರಮುಖ ಕಲಾಕೃತಿಗಳು. ಇವರು ನಿರ್ದೇಶಿಸಿರುವ ಸುಮಾರು ಮೂವತ್ತು ಚಿಲ್ಲರೆ ಸಿನೆಮಾಗಳಲ್ಲಿ ಹದಿನಾಲ್ಕು ಸಿನೆಮಾಗಳು ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳನ್ನ ಗಳಿಸಿವೆ. ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸ್ಥಾಪಿತ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿರುವ ಟಿ ಎಸ್ ನಾಗಾಭರಣ ಕರ್ನಾಟಕದ ಅಮೂಲ್ಯ ಆಸ್ತಿ. ಈ ಕಥಾ ಶ್ರಾವ್ಯ ಯೋಜನೆಯಲ್ಲಿ ಅವರು ನಮಗಾಗಿ ಕನ್ನಡದ ಬೆಸ್ಟ್ ಸೆಲ್ಲರ್ ಗಳಲ್ಲಿ ಒಬ್ಬರಾಗಿರುವ ರವಿ ಬೆಳಗೆರೆಯವರ 'ಮಸೀದಿ ಬಿದ್ದ ಮೂರನೇ ದಿನ' ಕತೆಯನ್ನ ಓದಿದ್ದಾರೆ.
ಹಿನ್ನೆಲೆ ಸಂಗೀತ: ಕೀರ್ತನ್
ಕೀರ್ತನ್, ಯುವಿಸಿಇ ಯಲ್ಲಿ ಇಂಜಿನಿಯರಿಂಗ್ ಓದಿದ್ದಾರೆ. ವೃತ್ತಿಯಲ್ಲಿ ಇಂಜಿನಿಯರ್ ಆದರೂ ಪ್ರವೃತ್ತಿಯಿಂದ ಸಂಗೀತಗಾರ. ಇವರು ಚಿಕ್ಕಂದಿನಿಂದಲೇ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕಲಿತಿದ್ದು, ಈಗ್ಗೆ ೫ ವರ್ಷಗಳಿಂದ ಜಾಹೀರಾತುಗಳನ್ನು ನಿರ್ಮಿಸುವುದು, ‘ಸ್ಯಾಂಡಲ್ ವುಡ್ ಸರಿಗಮ’ ದಂತಹ ನಾಟಕಗಳಿಗೆ ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ. ಪ್ರವೃತ್ತಿಯನ್ನೇ ವೃತ್ತಿ ಮಾಡಿಕೊಳ್ಳುವ ಉದ್ದೇಶ ಕೂಡ ಇವರಿಗಿದೆ.