Description

ಲೇಖಕರು: ಬೊಳುವಾರು ಮಹಮದ್ ಕುಂಞ್
ಕನ್ನಡ ಕಥನ ಜಗತ್ತಿಗೆ ಮುಸ್ಲಿಂ ಲೋಕದ ತವಕ ತಲ್ಲಣಗಳನ್ನು ಸಶಕ್ತವಾಗಿ ಕಟ್ಟಿಕೊಟ್ಟವರು ಬೊಳುವಾರು ಮಹಮದ್ ಕುಂಞ್ . ಹುಟ್ಟಿದ್ದು ಅಕ್ಟೋಬರ್ 22, 1951ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬೊಳುವಾರು ಎಂಬಲ್ಲಿ. ‘ಅತ್ತ, ಇತ್ತಗಳ ಸುತ್ತಮುತ್ತ’. ದೇವರುಗಳ ರಾಜ್ಯದಲ್ಲಿ, ಅಂಕ, ಆಕಾಶಕ್ಕೆ ನೀಲಿ ಪರದೆ, ಒಂದು ತುಂಡು ಗೋಡೆ, ಅವರ ಕಥಾಸಂಗ್ರಹಗಳು. ತಟ್ಟು ಚಪ್ಪಾಳೆ ಪುಟ್ಟ ಮಗು ಅವರು ಸಂಪಾದಿಸಿದ ಮಕ್ಕಳ ಪದ್ಯಗಳ ಸಂಕಲನ. ಜಿಹಾದ್, ಸ್ವಾತಂತ್ರ್ಯದ ಓಟ, ಓದಿರಿ ಅವರ ಕಾದಂಬರಿಗಳು. ಇವರು ಸಂಪಾದಿಸಿದ ತಟ್ಟು ಚಪ್ಪಾಳೆ ಪುಟ್ಟ ಮಗು- ಎಂಬ ಮಕ್ಕಳ ಪದ್ಯಗಳ ಸಂಕಲನದಿಂದಾಗಿ ಇವರು ಕನ್ನಡ ಮಕ್ಕಳ ಸಾಹಿತ್ಯದಲ್ಲೂ ಗಟ್ಟಿ ಜಾಗ ಪಡೆದಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿದ ಇವರ ಪಾಪು ಗಾಂಧಿ ಗಾಂಧಿ ಬಾಪು ಆದ ಕತೆ ( ಇದು ಪ್ರಕಟವಾದ ಎರಡು ವರ್ಷಗಳಲ್ಲಿ ನಾಲ್ಕು ಮುದ್ರಣ ಕಂಡಿದೆ) ಕನ್ನಡದ ಮಕ್ಕಳಿಗೆ ಮಹಾತ್ಮ ಗಾಂಧಿಯವನ್ನು ಹೊಸದಾಗಿ ಪರಿಚಯಿಸಿದೆ. ಈ ಕೃತಿ 2010ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಳಿಸಿದೆ. ‘ಸ್ವಾತಂತ್ರ್ಯದ ಓಟ’ ಕಾದಂಬರಿಗೆ 2016ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಭಾರತದ ಬಹುತೇಕ ಭಾಷೆಗಳಿಗೆ ಇವರ ಕತೆಗಳು ಅನುವಾದಗೊಂಡಿವೆ. ಬ್ಯಾಂಕ್ ಉದ್ಯೋಗಿಯಾಗಿ ನಾಲ್ಕು ದಶಕ ಕೆಲಸ ಮಾಡಿ ನಿವೃತ್ತರಾಗಿರುವ ಬೊಳುವಾರರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.ಅವರ ಕಥೆ ಗಾಂಧೀಜಿ ಮತ್ತು ಕಾಗೆಗಳು ಕೇಳಿ ಕಥೆ ಸಂಚಿಕೆಗೆ ಆರಿಸಿದ್ದೇವೆ

ಓದಿದವರು: : ಗಿರಿಜಾ ಲೋಕೇಶ್
ಗಿರಿಜಾ ಲೋಕೇಶ್ ತಮ್ಮನ್ನು ತಾವು ನಿರಂತರವಾಗಿ ಕನ್ನಡ ಚಲನಚಿತ್ರ, ಕಿರುತೆರೆ, ನಾಟಕಗಳು ಮುಂತಾದ ಕಲೆಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಕರ್ನಾಟಕದಲ್ಲೇ ಚಿರಪರಿಚಿತ ಹೆಸರು. ಲೆಕ್ಕವಿಲ್ಲದಷ್ಟು ಸಿನೆಮಾಗಳಲ್ಲಿ ಮತ್ತು ನಾಟಕಗಳಲ್ಲಿ ಕಳೆದ ನಲವತ್ತೈದು ವರ್ಷಗಳಿಂದ ಅಭಿನಯಿಸಿದ್ದಾರೆ. 2013 ರಲ್ಲಿ ಕರ್ನಾಟಕ ಸರ್ಕಾರ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟು ಗೌರವಿಸಿದೆ. ಈ ಸರಣಿಯಲ್ಲಿ ಇವರು ಎರಡೂ ಮಕ್ಕಳ ಕತೆಗಳನ್ನು ಓದಿದ್ದಾರೆ.

ಹಿನ್ನೆಲೆ ಸಂಗೀತ: ಎಮ್ ಡಿ ಪಲ್ಲವಿ
ಕನ್ನಡ ಸುಗಮ ಸಂಗೀತದ ಚಿರಪರಿಚಿತ ಹೆಸರು ಎಮ್ ಡಿ ಪಲ್ಲವಿ. ಸಾಕಷ್ಟು ಸಿನೆಮಾಗಳಲ್ಲೂ ಅಭಿನಯಿಸಿರುವ ಇವರು ಮಾಯಾಮೃಗದ ತಮ್ಮ ಪಾತ್ರದಿಂದ ರಾಜ್ಯಾದ್ಯಂತ ಜನಪ್ರಿಯರಾದವರು. ಗರ್ವ ಆಕೆಯ ಅಭಿನಯದ ಇನ್ನೊಂದು ಶ್ರೇಷ್ಠ ಧಾರಾವಾಹಿ. ದುನಿಯಾ ಚಿತ್ರದ ನೋಡಯ್ಯ ಕ್ವಾಟೆ ಲಿಂಗವೇ ಹಾಡಿಗೆ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. ರಂಗಭೂಮಿಯಲ್ಲೂ ಸಾಕಷ್ಟು ಕೆಲಸ ಮಾಡಿರುವ ಇವರು ಹ್ಯಾಮ್ಲೆಟ್, ಮಾನಿಷಾದ, ಅಗ್ನಿ ಮತ್ತು ಮಳೆಯಂತಹ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಪ್ರಕಾಶ್ ಬೆಳವಾಡಿಯವರ ಸ್ಟಂಬಲ್ ಚಿತ್ರದಲ್ಲಿ ಅಭಿನಯದ ಜೊತೆಗೆ ಚಿತ್ರಕತೆ ಮತ್ತು ನಿರ್ದೇಶನ ವಿಭಾಗದಲ್ಲೂ ದುಡಿದಿದ್ದಾರೆ. ಈ ಕಥಾ ಶ್ರಾವ್ಯ ಯೋಜನೆಯಲ್ಲಿ ನಾ ಡಿಸೋಜಾರ ಎರಡು ಮಕ್ಕಳ ಕತೆಗಳನ್ನ ನಮಗಾಗಿ ಓದಿದ್ದಾರೆ.
