Description

ಲೇಖಕರು: ವಿವೇಕ ಶಾನಭಾಗ
ವಿವೇಕ ಶಾನಭಾಗ, ಜನಿಸಿದ್ದು ೧೯೬೨ರಲ್ಲಿ ಶಿರಸಿಯಲ್ಲಿ. ಇಂಜಿನೀಯರಿಂಗ್ ವಿದ್ಯಾಭ್ಯಾಸ. ಕನ್ನಡದ ಮುಖ್ಯ ಕತೆಗಾರರಲ್ಲಿ ಒಬ್ಬರಾದ ಇವರು ಒಟ್ಟು ೧೦ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಮೊದಲ ಸಂಕಲನ "ಅಂಕುರ" (೧೯೮೫), ಲಂಗರು (೧೯೯೨), ಹುಲಿ ಸವಾರಿ (೧೯೯೫), ಮತ್ತೊಬ್ಬನ ಸಂಸಾರ (೨೦೦೫) ರಲ್ಲಿ ಪ್ರಕಟವಾದ ಕಥಾಸಂಕಲನಗಳು. "ಘಾಚರ್ ಘೋಚರ್" ಕಿರುಕಾದಂಬರಿ ೨೦೧೩ ರಲ್ಲಿ ಪ್ರಕಟವಾಯಿತು ಮತ್ತು ಇಂಗ್ಲಿಶ್ ಭಾಷೆಗೂ ತರ್ಜುಮೆಗೊಂಡು ಪ್ರಸಿದ್ಧವಾಯಿತು. ಇವರ ಕಾದಂಬರಿಗಳು: ಇನ್ನೂ ಒಂದು (೨೦೦೧), ಒಂದು ಬದಿ ಕಡಲು (೨೦೦೭) ಮತ್ತು ಊರು ಭಂಗ (೨೦೧೫). ಎರಡು ನಾಟಕಗಳನ್ನೂ ಇವರು ಪ್ರಕಟಿಸಿದ್ದಾರೆ. ಅವುಗಳು: "ಸಕ್ಕರೆ ಗೊಂಬೆ" (೧೯೯೯) ಮತ್ತು "ಬಹುಮುಖಿ" (೨೦೦೭). "ದೇಶಕಾಲ" ಎಂಬ ಕನ್ನಡದ ಸಾಹಿತ್ಯಿಕ ತ್ರೈಮಾಸಿಕದ ಸಮ್ಪಾದಕರಾಗಿ, ಅದನ್ನು ೫ ವರ್ಷಗಳ ಕಾಲ ನಡೆಸಿದ್ದರು.

ಓದಿದವರು: ಅಚ್ಯುತ್ ಕುಮಾರ್
ವಾಣಿಜ್ಯ ವಿಷಯದಲ್ಲಿ ಪದವಿ ಪಡೆದಿರುವ ಅಚ್ಯುತ್ ಕುಮಾರ್ ಆರಂಭದಲ್ಲಿ ಶಿವಮೊಗ್ಗದ ನೀನಾಸಂ ರಂಗ ಕಲಾವಿದನಾಗಿದ್ದರು. ಗಿರೀಶ್ ಕಾಸರವಳ್ಳಿ 2000 ದಲ್ಲಿ ಗೃಹಭಂಗ ಎಂಬ ತಮ್ಮ ಕಿರುತೆರೆಯ ಧಾರಾವಾಹಿಯ ಒಂದು ಪ್ರಧಾನವಾದ ಪಾತ್ರಕ್ಕಾಗಿ ಇವರನ್ನು ಆಯ್ಕೆ ಮಾಡಿಕೊಂಡಾಗ ಒಬ್ಬ ನಟನಾಗಿ ಗುರುತಿಸಲ್ಪಟ್ಟರು. ಮುಂದೆ ಅಚ್ಯುತ್ ಕುಮಾರ್ ಒಬ್ಬ ಅವಲಂಬಿಸಬಹುದಾದ ನಟನಾಗಿ ಬೆಳೆದು ಹಲವಾರು ಪ್ರಶಸ್ತಿಗಳನ್ನು ಗಳಿಸಿದರು. ಮೂರು ಬಾರಿ ಫಿಲಂ ಫೇರ್ ಪ್ರಶಸ್ತಿ ಪಡೆದಿದ್ದಾರೆ ಹಾಗೂ ಶ್ರೇಷ್ಠ ಪೋಷಕ ನಟ, ಶ್ರೇಷ್ಠ ನಟ ಎರಡೂ ವಿಭಾಗಗಳಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದಾರೆ. ಇದುವರೆಗೂ ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅಚ್ಯುತ್ ಕುಮಾರ್ ನಮಗಾಗಿ ನಿರ್ವಾಣ ಕತೆಯನ್ನು ಓದಿದ್ದಾರೆ.

ಹಿನ್ನೆಲೆ ಸಂಗೀತ: ಬಿಂದು ಮಾಲಿನಿ
ಬಿಂದು ಮಾಲಿನಿ ಭಾರತೀಯ ಚಲನಚಿತ್ರ ರಂಗದಲ್ಲಿ, ಅದರಲ್ಲೂ ಪ್ರಮುಖವಾಗಿ ತಮಿಳು ಸಿನೆಮಾಗಳಲ್ಲಿ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಬಿಂದು ನಾತಿಚರಾಮಿ, ಅರುವಿ ಮುಂತಾದ ಜನಪ್ರಿಯ ಸಿನೆಮಾಗಳಲ್ಲಿ ಕೆಲಸ ಮಾಡಿದ್ದಾರೆ. 2018 ರಲ್ಲಿ ತೆರೆಕಂಡ ನಾತಿಚರಾಮಿ ಇವರ ಸಂಗೀತ ನಿರ್ದೇಶನವಿರುವ ಇತ್ತೀಚಿನ ಸಿನೆಮಾ. ನಿರ್ವಾಣ ಎನ್ನುವ ಚಿತ್ರಕ್ಕೂ ಬಿಂದು ಸಂಗೀತ ಸಂಯೋಜಿಸಿದ್ದಾರೆ.
