Description
ಲೇಖಕರು: ಕೆ.ವಿ. ತಿರುಮಲೇಶ್
ಹೈದರಾಬಾದಿನಲ್ಲಿ ನೆಲೆಸಿರುವ ಕನ್ನಡದ ಹಿರಿಯ ಕವಿ, ಲೇಖಕ ಮತ್ತು ಭಾಷಾಶಾಸ್ತ್ರಜ್ಞರು, ಮೂಲತಃ ಕಾಸರಗೋಡಿನ ಬಳಿಯ ಕಾರಡ್ಕದವರು. ಕೆ.ವಿ. ತಿರುಮಲೇಶ್ ಕನ್ನಡದ ನವ್ಯಸಾಹಿತ್ಯದ ಸಂದರ್ಭದಲ್ಲಿ ಬರೆಯಲು ತೊಡಗಿದವರು. ಸುಮಾರು ಐದು ದಶಕಗಳ ಕಾಲ ಕವಿತೆ, ಕತೆ, ವಿಮರ್ಶೆ ಅನುವಾದ ಕ್ಷೇತ್ರಗಳಲ್ಲಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ‘ಮುಖವಾಡಗಳು’ ಹಾಗೂ ‘ವಠಾರ’ ಇವರ ಎರಡು ಜನಪ್ರಿಯ ಕೃತಿಗಳು. ಇವರ ೨೦ ಪ್ರಕಟಿತ ಕೃತಿಗಳಲ್ಲಿ ಅವಧ, ವಠಾರ, ಮುಖವಾಡಗಳು, ಪಾಪಿಯೂ ಎಂಬುವು ಮುಖ್ಯ ಕವನ ಸಂಕಲನಗಳು. ಆರೋಪ, ಮುಸುಗು ಇವರ ಕೆಲ ಕಾದಂಬರಿಗಳು. ಬೇಂದ್ರೆಯವರ ಕಾವ್ಯಶೈಲಿ, ನಮ್ಮ ಕನ್ನಡ, ಅಸ್ತಿತ್ವವಾದ ಇವು ಇವರ ಮುಖ್ಯ ವಿಮರ್ಶಾ ಕೃತಿಗಳು. ತಿರುಮಲೇಶ್ ಅವರ 'ಅಕ್ಷಯ ಕಾವ್ಯ' ಕೃತಿಗೆ 2015ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ.
ಓದಿದವರು: : ಗಿರಿಜಾ ಲೋಕೇಶ್
ಗಿರಿಜಾ ಲೋಕೇಶ್ ತಮ್ಮನ್ನು ತಾವು ನಿರಂತರವಾಗಿ ಕನ್ನಡ ಚಲನಚಿತ್ರ, ಕಿರುತೆರೆ, ನಾಟಕಗಳು ಮುಂತಾದ ಕಲೆಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಕರ್ನಾಟಕದಲ್ಲೇ ಚಿರಪರಿಚಿತ ಹೆಸರು. ಲೆಕ್ಕವಿಲ್ಲದಷ್ಟು ಸಿನೆಮಾಗಳಲ್ಲಿ ಮತ್ತು ನಾಟಕಗಳಲ್ಲಿ ಕಳೆದ ನಲವತ್ತೈದು ವರ್ಷಗಳಿಂದ ಅಭಿನಯಿಸಿದ್ದಾರೆ. 2013 ರಲ್ಲಿ ಕರ್ನಾಟಕ ಸರ್ಕಾರ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟು ಗೌರವಿಸಿದೆ. ಈ ಸರಣಿಯಲ್ಲಿ ಇವರು ಎರಡೂ ಮಕ್ಕಳ ಕತೆಗಳನ್ನು ಓದಿದ್ದಾರೆ.
ಸಂಗೀತ : ಸುಚೇತ್
ಬೆಂಗಳೂರಿನಲ್ಲಿ ನೆಲೆಸಿರುವ ಸುಚೇತ್ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ರಾಕ್ ಸಂಗೀತ ಎರಡರಿಂದಲೂ ಪ್ರಭಾವಿತರಾದವರು. ಗಿಟಾರಿಸ್ಟ್ ಆಗಿರುವ ಸುಚೇತ್ ಹೈಕು -ಲೈಕೆನ್ ಇಮ್ಯಾಜಿನೇಶನ್ ಎನ್ನುವ ಆಲ್ಬಮ್ ಗಾಗಿ ಸಂಗೀತ ನುಡಿಸುತ್ತಾರೆ. ಇವರ ಸಂಗೀತವನ್ನು ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಕೇಳಬಹುದು. ಸಂಗೀತದ ಜೊತೆಗೆ ಸುಚೇತ್ ಸದ್ಯಕ್ಕೆ ಸಿ.ಎ ಕೂಡ ಮಾಡುತ್ತಿದ್ದಾರೆ.