Description
ಲೇಖಕರು: ವಸುಧೇಂದ್ರ
ಸಮಕಾಲೀನ ಕನ್ನಡ ಸಾಹಿತ್ಯದ ಬಹು ಮುಖ್ಯ ಕತೆಗಾರ ವಸುಧೇಂದ್ರ. ಕನ್ನಡ ಪ್ರಬಂಧ ಪ್ರಕಾರದಲ್ಲೂ ಸಾಕಷ್ಟು ಕೆಲಸ ಮಾಡಿರುವ ವಸುಧೇಂದ್ರ ಛಂದ ಪ್ರಕಾಶನದ ಮೂಲಕ ಯುವ ಬರಹಗಾರರನ್ನು ಪ್ರೋತ್ಸಾಹಿಸುತ್ತಿದ್ದಾರೆ. ನಮ್ಮಮ್ಮ ಅಂದ್ರೆ ನಂಗಿಷ್ಟ ಅವರ ಪ್ರಮುಖ ಪ್ರಬಂಧಗಳ ಸಂಕಲನ. ಮನೀಷೆ, ಉಗಾದಿ, ಚೇಳು, ಹಂಪಿ ಎಕ್ಸ್ ಪ್ರೆಸ್ ಇವರ ಪ್ರಮುಖ ಕಥಾ ಸಂಕಲನಗಳು. ಹರಿಚಿತ್ತ ಸತ್ಯ ಅವರ ಮೊದಲ ಕಾದಂಬರಿ. ಇತ್ತೀಚಿಗೆ ಬರೆದ ತೇಜೋ ತುಂಗಭದ್ರಾ ಐತಿಹಾಸಿಕ ಕಾದಂಬರಿ ಸಾಕಷ್ಟು ಹೆಸರು ಮಾಡಿದೆ. ಈ ಯೋಜನೆಗಾಗಿ ಅವರ ಕೆಂಪು ಗಿಣಿ ಕತೆಯನ್ನ ಆರಿಸಿಕೊಳ್ಳಲಾಗಿದೆ. ಮಿಥುನ ಕಥಾ ಸಂಕಲನವನ್ನ ತೆಲುಗಿನಿಂದ ಅನುವಾದಿಸಿದ್ದಾರೆ.
ಓದಿದವರು: ಕಿಶೋರ್
ಕನ್ನಡದ ಪ್ರತಿಭಾವಂತ ಕಲಾವಿದ ಕಿಶೋರ್. ಜನಪ್ರಿಯ ಕನ್ನಡ ಸಿನೆಮಾಗಳಲ್ಲಿ ಮಾತ್ರವಲ್ಲ ತಮಿಳಿನಲ್ಲೂ ಸಾಕಷ್ಟು ಚಿತ್ರಗಳನ್ನ ನಿರ್ವಹಿಸಿದ್ದಾರೆ. ದುನಿಯಾ, ಪೊಲ್ಲಾದವನ್, ರಾಕ್ಷಸ, ಕಬಡ್ಡಿ, ಜಟ್ಟ, ಉಳಿದವರು ಕಂಡಂತೆ, ಆಡುಕಳಮ್ ಇವರು ಅಭಿನಯಿಸಿದ ಪ್ರಮುಖ ಚಿತ್ರಗಳು. ಮೂಲತಃ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಕಿಶೋರ್ ಇಂದು ಕನ್ನಡದ ಮಹತ್ವದ ಕಲಾವಿದರಾಗಿ ರೂಪುಗೊಂಡಿದ್ದಾರೆ. ರಾಕ್ಷಸ ಚಿತ್ರದ ಅಭಿನಯಕ್ಕೆ ರಾಜ್ಯ ಪ್ರಶಸ್ತಿ ಕೂಡ ಕಿಶೋರ್ ಅವರಿಗೆ ಸಂದಿದೆ. ಈ ಕಥಾ ಶ್ರಾವ್ಯದಲ್ಲವರು ವಸುಧೇಂದ್ರ ಅವರ ಕೆಂಪು ಗಿಣಿ ಕತೆಯನ್ನ ಓದಿದ್ದಾರೆ.
ಹಿನ್ನೆಲೆ ಸಂಗೀತ: ಹರ್ಷ ವರ್ಧನ್ ರಾಜ್
ಹರ್ಷವರ್ಧನ್ ರಾಜ್ ಅವರು ಬಹಳಷ್ಟು ಸಂಗೀತ ನಿರ್ದೇಶಕರೊಡನೆ ಕೆಲಸ ಮಾಡಿದ್ದಾರೆ ಮತ್ತು ಒಳ್ಳೆಯ ಕೀ ಬೋರ್ಡ್ ಪ್ಲೇಯರ್. ಸಂಗೀತ ಸಾಧನೆಯಲ್ಲಿಯೇ ತಮ್ಮ ಬಹುತೇಕ ಸಮಯವನ್ನು ಕಳೆಯುವುದು ಅವರ ನೆಚ್ಚಿನ ಕೆಲಸ.