fbpx

All profits go to girls in Kannada Medium Schools

Author : Roopa

December 23, 2022

kempu Gini

ಪ್ರತಿಯೊಂದು ಊರಿನ ಮಣ್ಣಿಗೂ ತನ್ನದೇ ಒಂದು ಘಮ, ಆಪ್ತತೆ, ನೆನಪುಗಳು ತುಂಬಿರುತ್ತವೆ. ಈಗಲೂ ಪ್ರಯಾಣದಲ್ಲಿ ಕಿಟಕಿಯ ಪಕ್ಕ ಕುಳಿತು ತನ್ನೂರು ಹತ್ತಿರವಾದಂತೆ ಆ ಮಣ್ಣಿನ ವಾಸನೆಯನ್ನ ಆಘ್ರಣಿಸಿ ಹೃದಯ ತುಂಬಿಕೊಳ್ಳುವ ಜನರು ಸಾಕಷ್ಟು…

ನನ್ನ ಬಾಲ್ಯದ ರಜೆಯ ದಿನಗಳೆಲ್ಲ ಹೆಚ್ಚಾಗಿ ನನ್ನಜ್ಜಿಯ ಊರಾದ ಮಾಸೂರು ಎಂಬ ಪುಟ್ಟ ಹಳ್ಳಿಯಲ್ಲೇ ಕಳೆಯುತ್ತಿತ್ತು. ನನ್ನ ದೊಡ್ಡಮ್ಮ, ಸೋದರಮಾವ ಇವರ ಹೊಲಗಳಲ್ಲಿ ಓಡಾಡುತ್ತಾ, ಅಲ್ಲಿ ಕೆಲಸ ಮಾಡುವ ಲಂಬಾಣಿ ಹೆಂಗಸರ ವೇಷಭೂಷಣಗಳನ್ನ ಅಚ್ಚರಿಯಿಂದ ನೋಡುತ್ತಾ “ಧಣ್ಯಾ ರ ಮನಿ ಮಕ್ಳು “ಅನ್ನೋ ಹಣೆಪಟ್ಟಿಯಲ್ಲಿ ಬೀಗುತ್ತಾ ದಿನ ಕಳೆದರೆ.. ರಾತ್ರಿ ಎಲ್ಲ ಮಕ್ಕಳು ಕೈತುತ್ತು ತಿನ್ನುತ್ತಾ, ನಕ್ಷತ್ರಗಳಲ್ಲಿ ನಮ್ಮ ಕಲ್ಪನೆಗೆ ನಿಲುಕುವ ಚಿತ್ರಗಳನ್ನ ಬಿಡಿಸುತ್ತಾ, ರಾತ್ರಿಯ ಆ ನೀರವತೆಯಲ್ಲಿ ಜಿರುಂಡೆಯ ಮತ್ತು ಇನ್ನೂ ಅನೇಕ ಹುಳುಗಳ ವಿಚಿತ್ರ ಶಬ್ದಗಳಿಗೆ ದೆವ್ವದ ಕಥೆಗಳನ್ನು ತಾಳೆ ಹಾಕುತ್ತಾ.. ನಾವು ಹೆದರುತ್ತಾ ಇತರರಿಗೂ ಹೆದರಿಸುತ್ತ ರಾತ್ರಿಗಳನ್ನ ಕಳೆಯುತ್ತಿದ್ದೆವು.

ಬೆಳಿಗ್ಗೆ ನದಿಗೆ ಹೋಗುವುದೆಂದರೆ ಅತೀ ಸಂಭ್ರಮದ ಸಂಗತಿ.. ಎತ್ತರವಾದ ಕೋಟೆ ಗೋಡೆ, ಅದರಂಚಿಗೆ ಶಾಂತವಾಗಿ ಹರಿಯುವ ನದಿ.. ದಂಡೆಗೆ ಪುಟ್ಟ ಈಶ್ವರನ ಕಲ್ಲಿನ ದೇವಸ್ಥಾನ.. ಅಲ್ಲಿಗೆ ಬರುವ ಹೆಂಗಸರು ಏರುಗಚ್ಚಿ ಹಾಕಿ ನದಿಯಲ್ಲಿ ಒಂದು ತುದಿ ಸೀರೆಯನ್ನ ಹಿಡಿದು ಇನ್ನೊಂದು ತುದಿ ನೀರಲ್ಲಿ ಬೀಸಿ ಅಲೆ ಅಲೆ ಯಾಗಿ ತಮ್ಮತ್ತ ಎಳೆದುಕೊಳ್ಳುತ್ತಾ ಬಟ್ಟೆ ಹಿಂಡುವುದು ನನ್ನ ಮಟ್ಟಿಗೆ ಅದೊಂದು ಅದ್ಭುತ ಕಾಯಕವೇ ಅನಿಸುತ್ತಿತ್ತು.
ಕಾರ್ತೀಕ ಮಾಸದ ನಸುಕಿನಲ್ಲಿ ದೀಪದ ದೊನ್ನೆಗಳನ್ನ ನದಿಯಲ್ಲಿ ತೇಲಿಬಿಟ್ಟು ಅವು ಬಂಗಾರವರ್ಣದ ನಕ್ಷತ್ರಗಳೇ ನದಿಯಲ್ಲಿ ತೇಲಿ ಹೋಗುವಂತೆ ಭಾಸವಾಗುತ್ತಿತ್ತು.

ಈಗ ಅದೇ ಹಳ್ಳಿಗೆ ಹೋದರೆ ಎಷ್ಟೋ ಮನೆಗಳು ಬಿಕೋ ಅನ್ನುತ್ತವೆ. ಈಗ ಮಣ್ಣಿನ ಹಾದಿಯ ಬದಲು ದಪ್ಪನಾದ ಕಾಂಕ್ರೀಟ ರೋಡು, ಬತ್ತಿ ಬರಡಾದ ನದಿ, ಕೋಟೆಯ ಹಾದಿ.. ಈಶ್ವರನ ದೇವಸ್ಥಾನ ಎಲ್ಲ ಮುಳ್ಳುಕಂಟಿಗಳಿಂದ ತುಂಬಿಹೋಗಿದೆ.. ಯಾರು ಅತ್ತಕಡೆ ಹೋಗುವುದೇ ಇಲ್ಲ.
ಈಗ ಮೊದಲಿನಷ್ಟು ನಕ್ಷತ್ರಗಳು ಕಾಣುತ್ತಿಲ್ಲ.. ಜೀರುಂಡೆಯ ಶಬ್ದವೂ ಅಷ್ಟಾಗಿ ಕೇಳುವುದಿಲ್ಲ…

Vasudhendra ಅವರ “ಕೆಂಪು ಗಿಣಿ ” ಕಥೆಯನ್ನ ಕೇಳಿದಾಗ ಅದರಲ್ಲೂ ಕಿಶೋರ್ ಅವರ ದನಿಯಲ್ಲಿನ ಆರ್ದತೆ ನನ್ನನ್ನ ಮತ್ತೇ ನನ್ನ ಬಾಲ್ಯಕ್ಕೆ ಕರೆದೋಯ್ಯದಿತ್ತು.

ಕಥೆಯ ಆರಂಭದಲ್ಲಿ ಲೇಖಕರು ಬಾಲ್ಯದ ಒಂದು ಘಟನೆಯನ್ನ ವಿವರಿಸುತ್ತಾ.. ಶಾಲೆಯಲ್ಲಿ ತಾವು ಹೊಲದ ಬಗ್ಗೆ ಬರೆದ ಪ್ರಬಂಧವನ್ನ, ಅವರ ವಿಚಿತ್ರ ಕಲ್ಪನೆಗಳನ್ನ ಹೇಳುತ್ತಿದ್ದಂತೆ ನಗು ಬಂದರೂ ಆ ಅದ್ಭುತ ಕಲ್ಪನೆಗೆ ಮನಸ್ಸು ತುಂಬಿಬರುತ್ತದೆ.
ಪಾತ್ರಗಳ ಮೂಲಕ ಹಳ್ಳಿಯ ಸೊಗಡನ್ನ, ಅವರ ಮುಗ್ಧತೆಯನ್ನ ಕಟ್ಟಿಕೊಡುತ್ತಾ ಕಥೆ ಸಾಗುತ್ತದೆ. ಅದರಲ್ಲಿ ಅಕ್ಕನೊಂದಿಗೆ ಹೊಲಕ್ಕೆ ಹೋಗುವಾಗ ಹಸಿರು ಗಿಡದಲ್ಲಿ ಕುಳಿತ ಹಸಿರು ಗಿಳಿಗಳನ್ನ ನೋಡುತ್ತಾ.. ಇವುಗಳಿಗೆಲ್ಲ ಕೆಂಪು ಬಣ್ಣ ಬಳೀಬೇಕು ಅಂದರೆ ಬಲು ಚೆಂದ..ಮತ್ತೇ ಸುಲಭವಾಗಿ ಕಂಡು ಹಿಡಿಯಬಹುದು ಅನ್ನುವ ಅವಳ ಕಲ್ಪನೆ, ರೈತನಾದ ಈರಪ್ಪನ ಏಳು ಹೆಡೆಯ ಸರ್ಪ ನಿಧಿಯನ್ನ ಕಾಯುತ್ತಿರುವಂತೆ ಅವನ ಕನಸು… ಇವುಗಳು ಭವಿಷ್ಯದಲ್ಲಿ ಅದೆಂತಹ ಕರಾಳತೆಯನ್ನ ಬಿಂಬಿಸುತ್ತವೆ ಊಹಿಸಲು ಅಸಾಧ್ಯ. ಕಥೆಯ ಕೊನೆಯಲ್ಲಿ ಮನಸ್ಸು ಕಂಪಿಸಿಬಿಡುತ್ತದೆ.

ಭೂಮಿಯನ್ನ, ಪರಿಸರವನ್ನ ನುಂಗಿಹಾಕುತ್ತಿರುವ ಮನುಷ್ಯನ ದುರಾಸೆ, ಜಾಗತೀಕರಣ, ಆಧುನಿಕತೆಯ ಹೆಸರಲ್ಲಿ ನಲುಗುತ್ತಿರುವ ಹಳ್ಳಿಗಳು… ಕಾಲಮಾನದ ವಿವಶತೆಯಲ್ಲಿ ಹಳ್ಳಿಯಿಂದ ವಲಸೆ ಹೊತ್ತಿರುವ ಜನರು.. ಈ ಕರಾಳತೆಯನ್ನ ನೆನೆದು ಮನಸ್ಸು ಆತಂಕಗೊಳ್ಳುತ್ತದೆ.

ಭೂಮಿ, ಪರಿಸರದ ನಂಟಿಲ್ಲದ ಈಗಿನ ಮಕ್ಕಳ ನೆನಪುಗಳು, ಕಲ್ಪನೆಗಳು ಹೇಗಿರುತ್ತವೆ ಅನ್ನುವ ಆತಂಕ, ನೋವು ಕಾಡದೇ ಇರುವದಿಲ್ಲ.ನಮ್ಮ ಮಕ್ಕಳಿಗೆ ಏನನ್ನೂ ಉಳಿಸಿಸಲಾರದ ಅಸಹಾಯಕತೆ ಕಾಡುತ್ತದೆ…!

EN
Share via
Copy link