Description

ಲೇಖಕರು: ಕುವೆಂಪು
ಕುವೆಂಪು ಎಂಬ ಕಾವ್ಯನಾಮದಿಂದ ಪ್ರಖ್ಯಾತರಾಗಿರುವ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಕನ್ನಡದ ಅಗ್ರಮಾನ್ಯ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಮತ್ತು ಚಿಂತಕ. ಕನ್ನಡದ ಮನಸ್ಸುಗಳ ಮೇಲೆ ಕುವೆಂಪುರವರಷ್ಟು ಪ್ರಭಾವ ಬೀರಿರುವ ಲೇಖಕ ಇನ್ನೊಬ್ಬರಿಲ್ಲವೇನೋ. ಹುಟ್ಟಿದ್ದು 1904ರ ಡಿಸೆಂಬರ್ 29 ರಂದು ಶಿವಮೊಗ್ಗ ಜಿಲ್ಲೆಯ ತೀರ್ಥ ಹಳ್ಳಿ ತಾಲೂಕಿನ ಕುಪ್ಪಳಿಯಲ್ಲಿ. ಕನ್ನಡ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿದ್ದು (1946) ಮುಂದೆ ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿ (1956-1960) ನಿವೃತ್ತ ರಾದರು. 'ಶ್ರೀರಾಮಾಯಣದರ್ಶನಂ' ಕಾವ್ಯಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1955) ಮತ್ತು 1967 ರ ಜ್ಞಾನಪೀಠ ಪ್ರಶಸ್ತಿ (1968) ರಾಷ್ಟ್ರಪತಿ ಯಿಂದ 'ಪದ್ಮಭೂಷಣ' (1958) ರಾಜ್ಯ ಸರ್ಕಾರದಿಂದ 'ರಾಷ್ಟ್ರಕವಿ' (1964), ಮೈಸೂರು, ಬೆಂಗಳೂರು, ಕರ್ನಾಟಕ, ಗುಲಬರ್ಗಾ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್, ಮೈಸೂರು ವಿಶ್ವವಿದ್ಯಾನಿಲಯದಿಂದ ಪ್ರೊಫೆಸರ್ ಇಮೆರಿಟಸ್, ಧಾರವಾಡದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ (1957) - ಅವರು ಪಡೆದ ಇತರ ಮುಖ್ಯ ಗೌರವ ಮತ್ತು ಪ್ರಶಸ್ತಿಗಳು. ಕಾವ್ಯ, ನಾಟಕ, ಕಾದಂಬರಿ, ಸಣ್ಣಕತೆ, ವಿಮರ್ಶೆ, ಜೀವನಚರಿತ್ರೆ, ಇತ್ಯಾದಿ ಸಾಹಿತ್ಯ ಪ್ರಕಾರಗಳಲ್ಲಿ ಸುಮಾರು ಅರವತ್ತು ಗ್ರಂಥಗಳು ಪ್ರಕಟಣೆಗೊಂಡಿವೆ.

ಓದಿದವರು: ವಶಿಷ್ಠ ಸಿಂಹ
ಮೈಸೂರಿನಲ್ಲಿ ಜನಿಸಿದ ವಶಿಷ್ಠ ತಮ್ಮ ವಿಶಿಷ್ಟ ದ್ವನಿ ಮತ್ತು ನಡವಳಿಕೆಯಿಂದಲೇ ಗುರುತಿಸಿಕೊಳ್ಳುವ ಉದಯೋನ್ಮುಖ ನಟ. ಇವರು ಸಿನೆಮಾ ಅಭಿನಯದ ಮೋಹಕ್ಕೆ ಸಿಕ್ಕು ಸಾಫ್ಟ್ ವೇರ್ ಎಂಜಿನಿಯರ್ ಕೆಲಸವನ್ನು ಬಿಟ್ಟು ಕನ್ನಡ ಸಿನೆಮಾ ರಂಗವನ್ನು ಪ್ರವೇಶಿಸಿದವರು. 2012 ರಲ್ಲಿ ತೆರೆ ಕಂಡ ತಮಿಳು ಯಶಸ್ವೀ ಚಿತ್ರ ಸುಂದರಪಾಂಡಿಯನ್ , 2013 ರಲ್ಲಿ ಕನ್ನಡದಲ್ಲಿ ರಾಜಾ ಹುಲಿ ಹೆಸರಿನಲ್ಲಿ ರಿಮೇಕ್ ಆಯಿತು. ಅದರಲ್ಲಿನ ನಾಯಕನ ಪಾತ್ರ ವಶಿಷ್ಠ ಅವರಿಗೆ ಮೊದಲ ಯಶಸ್ಸನ್ನು ತಂದು ಕೊಟ್ಟಿತು. ಮುಂದೆ ಅಲೋನ್ ಎನ್ನುವ ತಮಿಳು ಚಿತ್ರದಿಂದ ನಟನಾಗಿ ಬೆಳೆದರು.

ಹಿನ್ನೆಲೆ ಸಂಗೀತ: ಪ್ರಶಾಂತ್ ಪಚ್ಚಾಟು
ಪ್ರಶಾಂತ್ ವೃತ್ತಿಯಿಂದ ಒಬ್ಬ ಸಾಫ್ಟ್ ವೇರ್ ಡೆವೆಲಪರ್ ಆಗಿದ್ದಾರೆ. ಆದರೆ ಒಬ್ಬ ಶಾಸ್ತ್ರೀಯ ಪಿಯಾನೋ ವಾದಕನಾಗಿ ಮತ್ತು ಹಾಡುಗಾರನಾಗಿ ಹಲವು ವರ್ಷಗಳಿಂದ ಸಂಗೀತದೊಂದಿಗೆ ಬೆಸೆದುಕೊಂಡು ಹಲವಾರು ಸಂಯೋಜನೆಗಳಿಂದ, ತಮ್ಮದೇ ಸ್ವತಂತ್ರ ಕೆಲಸಗಳಿಂದ ತಮಗಾಗಿ ಒಂದು ಅನನ್ಯವಾದ ಸ್ಥಾನವನ್ನು ರಚಿಸಿಕೊಂಡಿದ್ದಾರೆ. ಅವರ ಸಂಗೀತ ಸಂಯೋಜನೆಗಳು ಪಾಶ್ಚಾತ್ಯ ಪ್ರಭಾವಗಳೊಂದಿಗೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಕಂಪನ್ನು ಹದವಾಗಿ ಬೆರೆಸಿ ಅನನ್ಯವಾದ ಮಿಶ್ರಣವನ್ನು ಹೊರಹೊಮ್ಮಿಸುತ್ತವೆ. ತಮ್ಮ ವೃತ್ತಿಯೊಂದಿಗೆ ಸಂಗೀತದ ಸ್ವತಂತ್ರ ಯೋಜನೆಗಳನ್ನು ಕುಶಲತೆಯಿಂದ ನಿಭಾಯಿಸುತ್ತಲೇ ಲಂಡನ್ ಕಾಲೇಜ್ ಆಫ್ ಮ್ಯೂಸಿಕ್ ನಲ್ಲಿ ಪಿಯಾನೋ ಗ್ರೇಡ್ಸ್ ಕಲಿಯುತ್ತಿದ್ದಾರೆ.
